ತ್ರಿಪುರ 2 -
ಭಾರತ ಒಕ್ಕೂಟದ ಒಂದು  ರಾಜ್ಯ ; ಈಶಾನ್ಯಭಾರತದಲ್ಲಿ, ಉ.ಅ. 220 56' -240 32' ಮತ್ತು ಪೂ.ರೇ. 910 10'-920 22' ನಡುವೆ ಇದೆ.  ಪೂರ್ವದಲ್ಲಿ ಮೀeóÉೂೀರಾಮ್, ಈಶಾನ್ಯದಲ್ಲಿ ಅಸ್ಸಾಂ, ಉತ್ತರ ಪಶ್ಚಿಮ ದಕ್ಷಿಣಗಳಲ್ಲಿ ಬಾಂಗ್ಲಾದೇಶ ಇವೆ.  ವಿಸ್ತೀರ್ಣ 10,477 ಚ.ಕಿಮೀ. ; ಜನಸಂಖ್ಯೆ 15,56,342 (1971).  ರಾಜಧಾನಿ ಅಗರ್ತಲಾ.

       ರಾಜ್ಯದಲ್ಲಿ 3 ಜಿಲ್ಲೆಗಳೂ 44 ತಹಸೀಲುಗಳೂ 6 ಪಟ್ಟಣಗಳೂ 4,727 ಗ್ರಾಮಗಳೂ ಇವೆ.  ಉತ್ತರ ತ್ರಿಪುರ ಜಿಲ್ಲೆಯ ವಿಸ್ತೀರ್ಣ 3,541 ಚ.ಕಿಮೀ. , ಜನಸಂಖ್ಯೆ 4,05,009.  ಪಶ್ಚಿಮ ತ್ರಿಪುರದ ವಿಸ್ತೀರ್ಣ 3,359 ಚ.ಕಿಮೀ., ಜನಸಂಖ್ಯೆ 7,51,605.  ದಕ್ಷಿಣ ತ್ರಿಪುರ ಜಿಲ್ಲೆ 3,577 ಚ.ಕಿಮೀ. ವಿಸ್ತಾರವಾಗಿದೆ.  ಇದರ ಜನಸಂಖ್ಯೆ 3,99,728. 

    ಭೌತ ಲಕ್ಷಣ :  ತ್ರಿಪುರವನ್ನು ಭೌಗೋಳಿಕವಾಗಿ ಉತ್ತರದ ನಾಲ್ಕು ಕಣಿವೆಗಳು ಹಾಗೂ ದಕ್ಷಿಣದ ಅಗರ್ತಲಾ ಮೈದಾನ ಎಂದು ವಿಂಗಡಿಸಬಹುದು.  ಉತ್ತರದ ಕಣಿವೆಗಳು ಅನುಕ್ರಮವಾಗಿ ಧರ್ಮನಗರ್, ಕೈಲಾಷ್‍ಹರ್, ಕಮಲ್ ಪುರ್ ಮತ್ತು ಖೋವಾಯ್.  ಅತ್ಯಂತ ಪೂರ್ವಕ್ಕಿರುವ ಧರ್ಮನಗರ್ ಕಣಿವೆಯ ಪೂರ್ವದ ಅಂಚಿನಲ್ಲಿರುವ ಜಮರೈ ತಲಾಂಗ್ ಗಿರಿಶ್ರೇಣಿ ಸಮುದ್ರ ಮಟ್ಟಕ್ಕೆ 600-900 ಮೀ.  (2,000-3,000 ಅಡಿ) ಎತ್ತರವಾಗಿದೆ.  ಪಶ್ಚಿಮಕ್ಕಿರುವ ಸಖೋನ್ ತಲಾಂಗ್‍ನ ಎತ್ತರ 300-750 ಮೀ.  (1,000-2,500 ಅಡಿ).  ಈ ಕಣಿವೆಯ ದಕ್ಷಿಣದಲ್ಲಿ ದಕ್ಷಿಣೋತ್ತರವಾಗಿ ದೇವ್ ನದಿಯೂ ಉತ್ತರದಲ್ಲಿ ಜೂರಿ ನದಿಯೂ ಇವೆ.  ಈ ಕಣಿವೆ ಉತ್ತರಕ್ಕೆ ಹೋದಂತೆ ವಿಸ್ತಾರವಾಗಿದೆ.  ಇದು ಬೇಸಾಯ ಪ್ರಧಾನ ಪ್ರದೇಶ.  ಇಲ್ಲಿ ಜನಸಾಂದ್ರತೆಯೂ ಹೆಚ್ಚು.  ಈ ಕಣಿವೆಯ ಉತ್ತರದಲ್ಲಿ ಜೂರಿ ನದಿಯ ದಡದಲ್ಲಿ ಧರ್ಮನಗರ್ ಪಟ್ಟಣವಿದೆ.  ಕೈಲಾಷ್‍ಹರ್ ಕಣಿವೆ ಧರ್ಮನಗರ್ ಕಣಿವೆಯ ಪಶ್ಚಿಮಕ್ಕಿದೆ.  ಧರ್ಮನಗರ್ ಕಣಿವೆಯಂತೆ ಈ ಕಣಿವೆಯೂ ಇಡೀ ರಾಜ್ಯದ ಉದ್ದಕ್ಕೂ ಹಬ್ಬಿದೆ.  ಇದರ ಅಗಲ 19 ಕಿಮೀ. (12ಮೈ.)  ಇದರ ಪಶ್ಚಿಮದ ಅಂಚಿನಲ್ಲಿ ಲಾಂಗತರೈಶ್ರೇಣಿ ಇದೆ.  ಇದರ ಎತ್ತರ ಸಮುದ್ರ ಮಟ್ಟದಿಂದ 450 ಮೀ. ಗಿಂತ (1,500 ಅಡಿ) ಅಧಿಕ.  ಇದರ ಅತ್ಯುನ್ನತ ಶಿಖರದ ಎತ್ತರ 481 ಮೀ. (1,579 ಅಡಿ).  ಉತ್ತರಾಭಿಮುಖವಾಗಿ ಹರಿಯುವ ಮಾನು ನದಿಯೂ ಅದರ ಉಪನದಿಗಳೂ ಕಣಿವೆಯ ದಕ್ಷಿಣದ ಭಾಗವನ್ನು ಅಲ್ಲಲ್ಲಿ ಕೊರೆದಿವೆ.  ಅಲ್ಲಿ ದಟ್ಟವಾದ ಕಾಡುಗಳಿವೆ.  ಕಣಿವೆಯ ಉತ್ತರಭಾಗ ಹೆಚ್ಚು ವಿಶಾಲ ; ಅಲ್ಲಲ್ಲಿ ಜವುಗು ನೆಲವುಂಟು.  ಮಾನು ನದಿಯ ಬಲದಂಡೆಯಲ್ಲಿರುವ ಪಟ್ಟಣ ಕೈಲಾಷ್‍ಹರ್.  ಈ ಕಣಿವೆಯ ಪಶ್ಚಿಮಕ್ಕೆ 420 ಮೀ. ಗಳಿಗಿಂತ (1,400 ಅಡಿ) ಎತ್ತರವಾಗಿರುವ ಅಧರಮುರ ಶ್ರೇಣಿಗೂ ಲಾಂಗ್‍ತರೈ ಶ್ರೇಣಿಗೂ ನಡುವೆ ಇರುವುದು ಕಮಲ್‍ಪುರ್ ಕಣಿವೆ.  ಇಲ್ಲಿ ಧಲಾಯ್ ನದಿ ಉತ್ತರದ ಕಡೆ ಹರಿಯುತ್ತದೆ.  ದಕ್ಷಿಣದಲ್ಲಿ ದಟ್ಟವಾದ ಕಾಡುಗಳಿವೆ.  ಉತ್ತರದ್ದು ಜವುಗು ನೆಲ, ಬತ್ತ ಬೆಳೆಯುವ ಪ್ರದೇಶ.  ಧಲಾಯ್ ನದಿಯ ಎಡದಂಡೆಯ ಮೇಲೆ ಇರುವ ಪಟ್ಟಣ ಕಮಲ್‍ಪುರ್, ಅಧರಮುರ ಶ್ರೇಣಿಗೆ ಪಶ್ಚಿಮಕ್ಕಿರುವ ಕಣಿವೆ ಖೋವಾಯ್.  ಈ ಕಣಿವೆಯ ಪಶ್ಚಿಮದಲ್ಲಿರುವ ಗಿರಿಶ್ರೇಣಿ ದೇವ್‍ತಮೂರಾ ಅಷ್ಟೇನೂ ಎತ್ತರವಿಲ್ಲ.  ಇದು 245 ಮೀ. ಅಡಿಗಳಿಗಿಂತ ಹೆಚ್ಚು ಎತ್ತರವಿಲ್ಲ.  ಈ ಕಣಿವೆಯಲ್ಲಿ ಉತ್ತರಾಭಿಮುಖವಾಗಿ ಹರಿಯುವ ನದಿ ಖೋವಾಯ್.  ಖೋವಾಯ್ ಪಟ್ಟಣ ನದಿಯ ಬಲದಂಡೆಯ ಮೇಲೆ ಇದೆ.
 
   ಇಲ್ಲಿ ಉತ್ತರ ದಕ್ಷಿಣವಾಗಿ ಹಬ್ಬಿರುವ ಆರು ಮುಖ್ಯ ಗಿರಿಶ್ರೇಣಿಗಳಲ್ಲಿ ಪೂರ್ವದವು ಪಶ್ಚಿಮದವಕ್ಕಿಂತ ಅಧಿಕಾಧಿಕವಾಗಿ ಎತ್ತರವಾಗಿದೆ.  ಇದು ಸುಮಾರು 19 ಕಿಮೀ.ಗಳ ಅಂತರದಲ್ಲಿ ಹಬ್ಬಿವೆ.  ಇವುಗಳಲ್ಲಿ ಜಮರೈ ತಲಾಂಗ್, ಸಖೋನ್ ತಲಾಂಗ್, ಲಾಂಗ್ ತರೈ, ಅಧರಮುರ ಮುಖ್ಯವಾದವು.  ಇವುಗಳಲ್ಲಿರುವ ಉನ್ನತ ಶಿಖರಗಳು ಇವು :  ಬೆಟ್‍ಲಿಂಗ್ ಸಿಬ (975 ಮೀ.) ಸಖೋನ್ (786 ಮೀ) ಫೆಂಗ್‍ಪೂಯಿ (482 ಮೀ) ಮತ್ತು ಜಾರಿಮುರ (458ಮೀ.).  
 
    ರಾಜ್ಯದ ದಕ್ಷಿಣದಲ್ಲಿರುವ ಅಗರ್ತಲಾ ಮೈದಾನದಲ್ಲಿ ಸೋನ್‍ಮುರ್, ಉದಯಪುರ್, ಅಮರ್‍ಪುರ್, ಬೆಲೊನಿಯ ಮತ್ತು ಸಬ್ರೂಮ್ ಎಂಬ ಐದು ಉಪವಿಭಾಗಗಳಿವೆ.  ಇಲ್ಲಿ ಅನೇಕ ಸಣ್ಣ ನದಿಗಳು ಹರಿಯುತ್ತವೆ.  ಅವುಗಳಲ್ಲಿ ಗುಮ್ತಿ ಮುಖ್ಯವಾದ್ದು.  ದಕ್ಷಿಣದ ಕಡೆ ಹರಿಯುವ ಅನೇಕ ಹೊಳೆಗಳು ಗುಮ್ತಿ ನದಿಯನ್ನು ಸೇರುತ್ತವೆ.  ಇದು ಗಿರಿಶ್ರೇಣಿಗಳನ್ನು ಹಾದು ರಾಧಾಕಿಶೋರ್‍ಪುರದ ಬಳಿ ಬಯಲನ್ನು ಪ್ರವೇಶಿಸುತ್ತದೆ.  ಈ ಭಾಗದಲ್ಲಿ ದೇಶ ಹೆಚ್ಚು ಬಯಲಾಗಿದೆ.  ಇಲ್ಲಿ ಹಳ್ಳಿಗಳೂ ಪಟ್ಟಣಗಳೂ ಅಧಿಕ.  ದೇಸ್ತಾಮುರ್ ಶ್ರೇಣಿಯ ಪಶ್ಚಿಮಕ್ಕಿರುವ ಬಯಲು ವಿಶಾಲವಾದ್ದು.  ಇದು ಸಾಂದ್ರ ಬೇಸಾಯದ ಪ್ರದೇಶ.  ರಾಜ್ಯದ ರಾಜಧಾನಿಯಾದ ಅಗರ್ತಲಾ ಇರುವುದು ಈ ಪ್ರದೇಶದಲ್ಲಿ.  ಹೋರಾ ನದಿಯ ದಡದ ಮೇಲೆ.  ಈ ಪ್ರದೇಶ ಸಂಪದ್ಭರಿತವಾದ್ದು.  ಗುಮ್ತಿ ನದಿ ಪಶ್ಚಿಮಕ್ಕೆ ಹರಿದು ಮೇಘ್ನಾ ನದಿಯನ್ನು ಸೇರುತ್ತದೆ.  ಫೆನ್ನಿ ಮತ್ತು ಮುಹರಿ ನದಿಗಳು ಬಂಗಾಲ ಕೊಲ್ಲಿ ಸೇರುತ್ತವೆ.  ತ್ರಿಪುರದ ಹಲವು ನದಿಗಳು ದೋಣಿಸಂಚಾರಕ್ಕೆ ಯೋಗ್ಯವಾದಂಥವು.  ಗುಮ್ತಿ ನದಿಯ ಮೇಲ್ಭಾಗದಲ್ಲಿ ದುಂಬಿರ ಜಲಪಾತವಿದೆ.

    ವಾಯುಗುಣ :  ಕಣಿವೆಗಳಲ್ಲಿ ಸೆಕೆ ಹೆಚ್ಚು.  ಗಿರಿಶ್ರೇಣಿಗಳು ತಂಪಾಗಿರುತ್ತವೆ.  ವರ್ಷಕ್ಕೆ 2,000 ಮಿಮೀ. ಗಿಂತ (80") ಹೆಚ್ಚು ಮಳೆಯಾಗುತ್ತದೆ.  ಜೂನ್‍ನಿಂದ ಸೆಪ್ಟೆಂಬರ್ ವರೆಗಿನ ಕಾಲದಲ್ಲಿ ಮಳೆಯಾಗುತ್ತದೆ.

    ಸಸ್ಯಪ್ರಾಣಿವರ್ಗ :  ತ್ರಿಪುರ ರಾಜ್ಯದ ಸ್ವಾಭಾವಿಕ ಸಸ್ಯವರ್ಗ ನಿತ್ಯ ಹಸುರು ಕಾಡು.  ಇಲ್ಲಿ ಸೇ.60 ರಷ್ಟು ಪ್ರದೇಶ ಅರಣ್ಯಾವೃತ.  ಒಟ್ಟು ಅರಣ್ಯ ಪ್ರದೇಶ 6,30,000 ಹೆಕ್ಟೇರುಗಳು.  ಇಲ್ಲಿಯ ಬೆಲೆಬಾಳುವ ಮರಗಳಲ್ಲಿ ಮುಖ್ಯವಾದವು ತೇಗ, ಮಹಾಗನಿ ಮತ್ತು ಸಾಲ.  ಎತ್ತರ ಪ್ರದೇಶದಲ್ಲಿ ಬಿದಿರು ಹೆಚ್ಚು.  ಕೆಳಮಟ್ಟದ ಪ್ರದೇಶದಲ್ಲಿ ಮರಗಳು ದಟ್ಟವಾಗಿದೆ.  ಅಲ್ಲಲ್ಲಿ ಬತ್ತ ಮತ್ತು ಮನೆಗೆ ಹೊದಿಸುವ ಹುಲ್ಲು ಇವೆ.  ಆನೆ, ಖಡ್ಗಮೃಗ, ಹುಲಿ, ಕಾಡುಹಂದಿ, ಚಿರತೆ, ನರಿ, ಕಾಡೆಮ್ಮೆ, ಕಾಡುನಾಯಿ, ಕಾಡೆತ್ತು ಮೊದಲಾದ ಪ್ರಾಣಿಗಳಿವೆ.

    ಖನಿಜ ಸಂಪತ್ತು :  ಈ ರಾಜ್ಯದಲ್ಲಿ ಹೆಚ್ಚು ಖನಿಜ ನಿಕ್ಷೇಪಗಳಿಲ್ಲ.

    ಕೃಷಿ :  ತ್ರಿಪುರದಲ್ಲಿ ವ್ಯವಸಾಯವೇ ಪ್ರಧಾನ ಉದ್ಯೋಗ.  ಇಲ್ಲಿ ಮಳೆ ಸಾಕಷ್ಟು ಬೀಳುವುದಾದರೂ ಅನಿಶ್ಚಿತ.  ಇಲ್ಲಿಯ ಮಣ್ಣು ತೇವವನ್ನು ಹಿಡಿದಿಡದಿರುವುದರಿಂದ ವ್ಯವಸಾಯಕ್ಕೆ ಅನುಕೂಲವಾಗಿಲ್ಲ.  ಮುಖ್ಯ ಬೆಳೆ ಬತ್ತ.    ಕೈಲಾಷ್‍ಹರ್ ಕಣಿವೆಯ ಉತ್ತರದ ತೇವ ಪ್ರದೇಶದಲ್ಲಿ ಇದನ್ನು ವಿಶೇಷವಾಗಿ ಬೆಳೆಯುತ್ತಾರೆ.  ಇತರ ಬೆಳೆಗಳು, ಸೆಣಬು, ಹತ್ತಿ, ಚಹ, ಹಣ್ಣು, ಇವಲ್ಲದೆ ಕಬ್ಬು, ಸಾಸಿವೆ, ಆಲೂಗಡ್ಡೆ, ಮೆಣಸಿನಕಾಯಿ, ಈರುಳ್ಳಿ ಮತ್ತು ಎಣ್ಣೆ ಬೀಜಗಳನ್ನೂ ಬೆಳೆಯುತ್ತಾರೆ.  ರಬ್ಬರ್ ಮತ್ತು ಉಪ್ಪು ನೇರಳೆ ಇನ್ನೆರಡು ಬೆಳೆಗಳು.  ದೇಶದ ವಿಸ್ತೀರ್ಣದಲ್ಲಿ ಸೇ 22 ರಷ್ಟರಲ್ಲಿ ಎಂದರೆ 2.4 ಲಕ್ಷ ಹೆಕ್ಟೇರುಗಳಲ್ಲಿ ಸಾಗುವಳಿಯಾಗುತ್ತದೆ.  ಆಹಾರೇತರ ಬೆಳೆಯ ಪ್ರದೇಶ 86,000 ಹೆಕ್ಟೇರ್ (1973).  5,526 ಹೆಕ್ಟೇರ್‍ಗಳಲ್ಲಿ ಚಹ ತೋಟಗಳಿವೆ.  ವರ್ಷಕ್ಕೆ 37.8 ಲಕ್ಷ ಕೆಜಿ. ಸಂಸ್ಕರಣ ಮಾಡಿದ ಚಹ ಉತ್ಪಾದನೆಯಾಗುತ್ತದೆ.  105 ಸಾವಿರ ಹೆಕ್ಟೇರ್‍ಗಳಲ್ಲಿ ವಾರ್ಷಿಕವಾಗಿ ಒಂದಕ್ಕಿಂತ ಹೆಚ್ಚು ಬೆಳೆ ಬೆಳೆಯುತ್ತಾರೆ.  22 ಸಾವಿರ ಹೆಕ್ಟೇರುಗಳ ಪ್ರದೇಶ ನೀರಾವರಿಗೆ ಒಳಪಟ್ಟಿದೆ.  ರಾಜ್ಯದಲ್ಲಿ ಯಾವ ಬೃಹತ್ ನೀರಾವರಿ ಯೋಜನೆಗಳೂ ಇಲ್ಲ.  ಈ ರಾಜ್ಯದಲ್ಲಿ ಬೆಳೆಯುವ ಆಹಾರ ಬೆಳೆ ಇಲ್ಲಿಯ ಜನಕ್ಕೆ ಸಾಕಾಗುವುದಿಲ್ಲ.  ಆಹಾರ ಧಾನ್ಯಗಳನ್ನು ಹೊರಗಡೆಯಿಂದ ತರಿಸಿಕೊಳ್ಳಬೇಕಾಗುತ್ತದೆ.

    ಇಲ್ಲಿ ಸಾಗುವಳಿಗೆ ಕೋಣಗಳನ್ನು ಹೆಚ್ಚಾಗಿ ಬಳಸುತ್ತಾರೆ.  ಅವುಗಳಲ್ಲಿ ಮಣಿ ಪುರಿ ಮತ್ತು ಬಂಗಾರ್ ತಳಿಗಳು ಮುಖ್ಯವಾದವು.

    ವಿದ್ಯುತ್ತು :  ಡೀಸೆಲ್ ಯಂತ್ರಗಳಿಂದ ಅಗರ್ತಲಾ, ಅಂಬಾಸ, ಖೋವಾಯ್, ಧರ್ಮನಗರ್, ಕೈಲಾಷ್‍ಹರ್ ಉದಯಪುರ್ ಮತ್ತು ಬೊಗಾಫಗಳಲ್ಲಿ ವಿದ್ಯುತ್ತನ್ನು ಉತ್ಪಾದನೆ ಮಾಡುತ್ತಾರೆ.  ಸೇ. 2.1 ರಷ್ಟು ಹಳ್ಳಿಗಳಿಗೆ ವಿದ್ಯುತ್ತು ಒದಗಿದೆ.

     ಕೈಗಾರಿಕೆ :  ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳಿಲ್ಲ.  ಎರಡು ಕೈಗಾರಿಕಾ ಕ್ಷೇತ್ರಗಳಿವೆ.  ಉದಯಪುರದಲ್ಲಿರುವ ಕ್ಷೇತ್ರದಲ್ಲಿ ಕಮ್ಮಾರಿಕೆ ಮತ್ತು ಮರಗೆಲಸ ಕೈಗಾರಿಕೆಗಳಿವೆ.  ಇವುಗಳಲ್ಲಿ ವಾರ್ಷಿಕವಾಗಿ ಸುಮಾರು 28.800 ರೂ.ಗಳಷ್ಟು ಬೆಲೆಬಾಳುವ ಪೀಠೋಪಕರಣ ಮತ್ತು ವ್ಯವಸಾಯೋಪಕರಣಗಳನ್ನು ತಯಾರಿಸಲಾಗುತ್ತದೆ(1970-71).  ಆರುಂಧತಿ ನಗರದಲ್ಲಿರುವ ಕೈಗಾರಿಕಾ ಕ್ಷೇತ್ರದಲ್ಲಿ 1970-71 ರಲ್ಲಿ 10,91,000 ರೂ.  ಮೌಲ್ಯದ ಪದಾರ್ಥಗಳು ತಯಾರಾದುವು.  ಸಾಬೂನು, ಅಲ್ಯೂಮಿನಿಯಂ ಪಾತ್ರೆಗಳು, ತಗಡಿನ ಪೆಟ್ಟಿಗೆಗಳು, ಬೀಡಿ, ಇಟ್ಟಿಗೆ, ಕೊಳವೆಗಳು, ಕೊಡೆಯ ಹಿಡಿ ಮುಂತಾದವುಗಳ ತಯಾರಿಕೆ ; ಕೈಮಗ್ಗ, ಮರಗೆಲಸ, ಕಬ್ಬಿಣ ಕೆಲಸ, ಎಣ್ಣೆ ತೆಗೆಯುವುದು, ಮೋಟಾರು ವಾಹನಗಳ ರಿಪೇರಿ, ಹಣ್ಣುಗಳ ಡಬ್ಬೀಕರಣ ಮುಂತಾದ ಉದ್ಯಮಗಳಿವೆ.  ಅಕ್ಕಿ, ಎಣ್ಣೆ ಮತ್ತು ಹಿಟ್ಟಿನ 128 ಗಿರಿಣಿಗಳಿವೆ;  607 ಕೈಮಗ್ಗಗಳಿವೆ.   5 ಸಾಬೂನು ಕಾರ್ಖಾನೆಗಳಿವೆ.  ರಾಜ್ಯದಲ್ಲಿರುವ ಕೆಲಸಗಾರರ ಸಂಖ್ಯೆ 4,34,796 (1971).  ಇಲ್ಲಿ 69 ನೊಂದಾಯಿತ ಕಾರ್ಮಿಕ ಸಂಘಗಳಿವೆ.  ಇವುಗಳ ಒಟ್ಟು ಸದಸ್ಯರ ಸಂಖ್ಯೆ 13,000.  ಉತ್ತರ ತ್ರಿಪುರದ ಫಾತಿಕಿರೆಯಲ್ಲಿ ಕಾಗದದ ಕಾರ್ಖಾನೆ ಸ್ಥಾಪಿಸಲು ಕೇಂದ್ರ ಸರ್ಕಾರ ನೆರವು ನೀಡಿದೆ.  ಈ ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಕಾರ್ಪೋರೇಷನ್ ಇದೆ.
 
   ಸಾರಿಗೆ :  ಈ ರಾಜ್ಯದ ಬಹುಭಾಗ ಗುಡ್ಡ ಬೆಟ್ಟಗಳಿಂದಲೂ ಕಾಡುಗಳಿಂದಲೂ ಕೂಡಿರುವುದರಿಂದ ಇಲ್ಲಿ ಸಾರಿಗೆ ಸಂಪರ್ಕ ಕಠಿಣ, ರಸ್ತೆ ನಿರ್ಮಾಣ ವೆಚ್ಚ ದುಬಾರಿ.  ಬೆಟ್ಟಗಾಡು ಪ್ರದೇಶದಲ್ಲಿ ಈಚೆಗೆ ಅನೇಕ ರಸ್ತೆಗಳು ಹೊಸದಾಗಿ ನಿರ್ಮಾಣವಾಗಿವೆ.  ಮೋಟಾರು ವಾಹನಗಳು ಸಂಚರಿಸಬಲ್ಲ ರಸ್ತೆಯ ಉದ್ದ 3,599 ಕಿಮೀ.  ಒಂದು ರಾಷ್ಟ್ರೀಯ ಹೆದ್ದಾರಿಯೂ ಎರಡು ರಾಜ್ಯ ಹೆದ್ದಾರಿಗಳೂ ಇವೆ.  ಅಸ್ಸಾಂ-ಅಗರ್ತಲಾ ಮತ್ತು ಅಗರ್ತಲಾ-ಸಬ್‍ರೂಮ್ ರಸ್ತೆಗಳು ರಾಜ್ಯ ಹೆದ್ದಾರಿಗಳು.  ಧರ್ಮನಗರದಿಂದ ಅಸ್ಸಾಮಿನ ಕಲ್ಕಾಲಿಘಾಟಿಗೆ ಸಂಪರ್ಕ ಕಲ್ಪಿಸುವ ರೈಲುಮಾರ್ಗ ಹೊಸದು.  ಅಗರ್ತಲಾ-ಧರ್ಮನಗರ್ ರೈಲುಮಾರ್ಗ ನಿರ್ಮಾಣಕ್ಕೆ ಸರ್ವೇಕ್ಷಣೆ ಅಗಿದೆ.

     ಜನ :  ರಾಜ್ಯದಲ್ಲಿ ಪ್ರಧಾನವಾಗಿ ಮಂಗೋಲಿಯ ಬುಡಕಟ್ಟಿಗೆ ಸೇರಿದ ಜನರಿದ್ದಾರೆ.  ಅವರು ಹೆಚ್ಚಾಗಿ ಮುರುಂಗರು ಮತ್ತು ಆರಕಾನರಿಗೆ ಸಂಬಂಧಿಸಿದ್ದಾರೆ.  ಅವರನ್ನು ಪುರಾನ್ ಅಥವಾ ಮೂಲ ತಿಪ್ಪೇರಿಯನ್ನರೆಂದೂ ಜಮಾತಿಯರೆಂದೂ ಎರಡು ಪಂಗಡಗಳಿಗಾಗಿ ವಿಂಗಡಿಸಬಹುದು.  ಜಮಾತಿಯರು ಯುದ್ಧ ಮಾಡುವುದರಲ್ಲಿ ಹೆಸರಾದವರು.  ಇವರಲ್ಲದೆ ಚಿತ್ತಗಾಂಗಿನಿಂದ ಬಂದವರೆಂದು ಹೇಳಲಾದ ನವಾತಿಯರು ಮತ್ತು ಕುಕಿ ಮೂಲಕ್ಕೆ ಸೇರಿದ ರಿಯಾಂಗರು ಇದ್ದಾರೆ.  ತ್ರಿಪುರಿ ಮತ್ತು ಬಂಗಾಳಿ ಭಾಷೆಗಳು ಪ್ರಧಾನವಾಗಿವೆ.  ಸ್ವಾತಂತ್ರ್ಯ ಕಾಲದ ವರೆಗೂ ಇಲ್ಲಿ ಗುಡ್ಡಗಾಡು ಜನರೇ ಪ್ರಧಾನವಾಗಿದ್ದರು.  ಆದರೆ ಭಾರತ ವಿಭಜನೆ ಮತ್ತು ಬಾಂಗ್ಲಾ ವಿಮೋಚನಾ ಸಮರ ಕಾಲದಲ್ಲಿ ಬಹು ಸಂಖ್ಯೆಯಲ್ಲಿ ನಿರಾಶ್ರಿತರು ಇಲ್ಲಿ ಪ್ರವೇಶಿಸಿದರು.  ತ್ರಿಪುರದಲ್ಲಿ ಮೂಲವಾಸಿಗಳು ಸೇ.28,95 ರಷ್ಟಿದ್ದಾರೆ (1971).

    ತ್ರಿಪುರ ರಾಜ್ಯದಲ್ಲಿ ಹಿಂದೂಗಳು ಬಹುಸಂಖ್ಯಾತರು.  ಮುಸ್ಲಿಮರೂ ಬೌದ್ದರೂ ಸರ್ವೆಚೇತನವಾದಿಗಳೂ ಇದ್ದಾರೆ.  ಇಲ್ಲಿಯ ಜನರು ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ದೇವತೆಗಳ ಆರಾಧನೆಯೊಂದಿಗೆ ತಮ್ಮ ಗುಂಪುಗಳ ದೇವತೆಗಳ ಆರಾಧನೆ ಮತ್ತು ಆಚರಣೆಗಳನ್ನೂ ಮುಂದುವರಿಸಿಕೊಂಡು ಬಂದಿದ್ದಾರೆ.
 
   ಇಲ್ಲಿಯ ವಿವಾಹ ಪದ್ಧತಿ ಪಾರಂಪರಿಕವಾದ್ದು.  ಒಬ್ಬ ಯುವಕ ಮದುವೆಯಾಗಬೇಕಾದರೆ ಅವನು ಮದುವೆಯಾಗುವ ಹುಡುಗಿಯ ತಂದೆಯ ಮನೆಯಲ್ಲಿ ಸುಮಾರು ಒಂದರಿಂದ ಮೂರು ವರ್ಷಗಳ ವರೆಗೂ ಸೇವೆ ಸಲ್ಲಿಸಬೇಕು.  ವಿವಾಹ ವಿಚ್ಛೇದ ಮತ್ತು ವಿಧವಾ ವಿವಾಹಗಳಿಗೆ ಇಲ್ಲಿಯ ಸಮಾಜದಲ್ಲಿ ಅವಕಾಶವಿದೆ.  ಇವರು ಸತ್ತವರನ್ನು ಸುಡುತ್ತಾರೆ.  ವಿವಿಧ ಧರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಹಬ್ಬ ಉತ್ಸವಗಳಲ್ಲಿ ತ್ರಿಪುರಿ ಜನಪದ ಕಲೆಗಳನ್ನು ಪ್ರದರ್ಶಿಸುತ್ತಾರೆ.

    ಗ್ರಾಮ ಜೀವನವೇ ಇಲ್ಲಿ ಪ್ರಧಾನ.  ಸೇ.90 ರಷ್ಟು ಜನರು ಗ್ರಾಮ ಪ್ರದೇಶಗಳಲ್ಲಿ ವಾಸಿಸುತ್ತಾರೆ.

   ಸ್ವಾತಂತ್ರ್ಯ ಪೂರ್ವಕಾಲದಲ್ಲಿ ಇಲ್ಲಿಯ ಆರೋಗ್ಯ ಸೇವಾ ವ್ಯವಸ್ಥೆ ತೀರ ಬಿದ್ದಿತ್ತು.  ಅಗರ್ತಲಾದಲ್ಲಿ 40 ಹಾಸಿಗೆಗಳುಳ್ಳ ಒಂದು ಆಸ್ಪತ್ರೆ ಮತ್ತು ಇಡೀ ರಾಜ್ಯದಲ್ಲಿ 29 ಔಷಧಾಲಯಗಳಿದ್ದುವು.  ಕಳೆದ ಎರಡು ಶತಮಾನಗಳಲ್ಲಿ ಗಣನೀಯ ಪ್ರಗತಿ ಆಗಿದೆ.  ಈಗ 11 ಆಸ್ಪತ್ರೆಗಳು, 22 ಆರೋಗ್ಯ ಕೇಂದ್ರಗಳು, 124 ಔಷಧಾಲಯಗಳು 1 ಆಯುರ್ವೇದ ಶಾಲೆ, 1 ಹೋಮಿಯೋಪತಿ ಔಷಧಾಲಯ, 1 ಕಣ್ಣಿನ ಆಸ್ಪತ್ರೆ, 1 ಹೃದಯ ಪರೀಕ್ಷೆ ಆಸ್ಪತ್ರೆ, 1 ಕುಷ್ಠರೋಗಿ ಆಸ್ಪತ್ರೆ, 1 ದಂತ ಪರೀಕ್ಷೆ ಆಸ್ಪತ್ರೆ, 1 ಗುಹ್ಯ ರೋಗ ಮತ್ತು ಚರ್ಮವ್ಯಾದಿ ಆಸ್ಪತ್ರೆ, 1 ಮಾನಸಿಕ ರೋಗ ಆಸ್ಪತ್ರೆ ಇವೆ (1970-71).  ಅಗರ್ತಲಾದಲ್ಲಿ ಅಂಧರಿಗಾಗಿ ಒಂದು ಸಂಸ್ಥೆ ಇದೆ.

    ರಾಜ್ಯದಲ್ಲಿಯ ಸಾಕ್ಷರತೆ ಸೇ. 30.98 ಶೈಕ್ಷಣಿಕ ಕೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ.  357 ಶಿಶುವಿಹಾರಗಳು, 1,381 ಪ್ರಾಥಮಿಕ ಶಾಲೆಗಳು, 220 , ಮಾಧ್ಯಮಿಕ ಶಾಲೆಗಳು, 89 ಪ್ರೌಢ ಶಾಲೆಗಳು, 6 ಸಾಮಾನ್ಯ ಶಿಕ್ಷಣ ಕಾಲೇಜುಗಳು, 9 ವೃತ್ತಿ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಕಾಲೇಜುಗಳು, 423 ಸಾಮಾಜಿಕ ಶಿಕ್ಷಣ ಕೇಂದ್ರಗಳು ಇವೆ.  ಅಲ್ಲದೆ ದಾದಿಯರ ತರಬೇತಿ ಕೇಂದ್ರಗಳು ಕೈಗಾರಿಕಾ ತರಬೇತಿ ಕೇಂದ್ರಗಳೂ ಇವೆ.

    ಇತಿಹಾಸ :  ರಾಜ್ಯಕ್ಕೆ ತ್ರಿಪುರ ಎಂಬ ಹೆಸರು ಹೇಗೆ ಬಂತು ಎಂಬುದು ತಿಳಿದುಬಂದಿಲ್ಲ.  ಚಂದ್ರವಂಶದ ಯಯಾತಿಯ ಮಗ ದ್ರುಹ್ಯುವಿನ ವಂಶದವರು ಇಲ್ಲಿ ಆಳುತ್ತಿದ್ದರೆಂದು 15ನೆಯ ಶತಮಾನದಲ್ಲಿ ರಚಿತವಾದ ರಾಜಮಾಲಾ ಎಂಬ ಗ್ರಂಥದಲ್ಲಿ ಹೇಳಲಾಗಿದೆ.  ಇಲ್ಲಿಯವರು ಶಿವನ ಆರಾಧಕರಾಗಿದ್ದರೆಂದೂ ನರಬಲಿ ಇತ್ತೆಂದೂ ತಿಳಿದುಬರುತ್ತದೆ.  ಇಲ್ಲಿಯ ಪ್ರಸಿದ್ಧ ಪ್ರಾಚೀನ ತಿಪ್ಪೇರಾ ರಾಜ್ಯ ಉತ್ತರದಲ್ಲಿ ಕಾಮರೂಪದಿಂದ ಪೂರ್ವದ ಬರ್ಮದ ವರೆಗೂ ಹಬ್ಬಿತ್ತು ; ಪಶ್ಚಿಮದಲ್ಲಿ ಅವಿಭಜಿತ ಬಂಗಾಳದ ಬಹು ಭಾಗವನ್ನು ಒಳಗೊಂಡಿತ್ತು.

       1279ರಲ್ಲಿ ಈ ರಾಜ್ಯದ ಮೇಲೆ ತುಘ್ರಿಲ್ ಎಂಬವನು ದಂಡಯಾತ್ರೆ ಕೈಗೊಂಡ.  ಇಲ್ಯಾಸ್ ಶಾಹ ಎಂಬವನು 14ನೆಯ ಶತಮಾನ ಮಧ್ಯಭಾಗದಲ್ಲಿ ಇದರ ಮೇಲೆ ದಾಳಿ ನಡೆಸಿದ.  1620 ರಲ್ಲಿ ಇದು ನವಾಬ್ ಫತೆ ಜಂಗನ ಆಕ್ರಮಣಕ್ಕೊಳಗಾಯಿತು.  1733ರ ವರೆಗೂ ಇಲ್ಲಿಯ ತಿಪ್ಪೇರಾ ಜಿಲ್ಲೆ ಅಥವಾ ಬಯಲು ಪ್ರದೇಶ ಭಾಗಶಃ ಸ್ವತಂತ್ರವಾಗಿತ್ತು.  ತಿಪ್ಪೇರಾ ಗಿರಿ ರಾಜ್ಯವನ್ನು ಮುಸ್ಲಿಮರು ಸಂಪೂರ್ಣವಾಗಿ ಎಂದೂ ಆಳಲಿಲ್ಲ.  ಆದರೆ ರಾಜರ ನೇಮಕದಲ್ಲಿ ಅವರು ತಮ್ಮ ಪ್ರಭಾವ ಬೀರುತ್ತಿದ್ದರು.  ಇಲ್ಲಿಯ ದೊರೆ ರತ್ನಫಾನಿಗೆ ಗೌರ್‍ನ ರಾಜ 1279 ರಲ್ಲಿ ಮಾಣಿಕ್ಯ ಎಂದು ಬಿರುದು ನೀಡಿದ.  ಅಂದಿನಿಂದ ಇಲ್ಲಿಯ ದೊರೆಗಳು ಈ ಬಿರುದನ್ನು ಧರಿಸುತ್ತ ಬಂದರು.  ಹದಿಮೂರನೆಯ ಶತಮಾನದಲ್ಲಿ ತಿಪ್ಪೇರಾ ರಾಜರ ಪ್ರಾಬಲ್ಯ ಪರಾಕಾಷ್ಠೆಗೇರಿತ್ತು.  ಬಿಜಯ್ ಮಾಣಿಕ್ಯ ಎಂಬವನು ಮುಸ್ಲಿಮರನ್ನು ಸೋಲಿಸಿ ಪ್ರಸಿದ್ಧನಾದ.
 
   ಈಸ್ಟ್ ಇಂಡಿಯ ಕಂಪೆನಿ 1765ರಲ್ಲಿ ಬಂಗಾಲದ ದಿವಾನಿ ಪಡೆಯಿತು.  ಅದು ಇಲ್ಲಿ ರಾಜನ ಆಳ್ವಿಕೆಗೆ ಅವಕಾಶ ನೀಡಿತು.  ಆಳುತ್ತಿದ್ದ ರಾಜ ಸತ್ತಾಗ ಅವನ ಉತ್ತರಾಧಿಕಾರಿ ಬ್ರಿಟಿಷ್ ಸರ್ಕಾರದಿಂದ ಅಧಿಕಾರ ಪಡೆಯಬೇಕಾಗಿತ್ತು.  1838 ರಿಂದ ಈ ಪ್ರದೇಶ ಬಂಗಾಳದ ಡೆಪ್ಯುಟಿ ಗವರ್ನರ್‍ನ ಅಧೀನಕ್ಕೆ ಒಳಪಟ್ಟಿತು.  ಗಿರಿ ಪ್ರದೇಶದ ಮೇಲೆ ಮಾತ್ರ ರಾಜನ ಹಕ್ಕು ಉಳಿಯಿತು.  1826 ರಿಂದ 1862ರ ವೆರಗೆ ಈ ರಾಜ್ಯದ ಪೂರ್ವಭಾಗ ಕುಕಿ ಜನರ ದಾಳಿಗಳಿಗೆ ಆಗಾಗ ಒಳಗಾಗುತ್ತಿತ್ತು.  ಬ್ರಿಟಿಷ್ ಸರ್ಕಾರ ಈ ದರೋಡೆಕೋರರನ್ನು ಅಡಗಿಸಿತು.

    ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ 52ನೆಯ ವಾರ್ಷಿಕ ಅಧೀವೇಶನ 1939 ರಲ್ಲಿ ಸುಭಾಷ್ ಚಂದ್ರ ಬೋಸರ ಅಧ್ಯಕ್ಷತೆಯಲ್ಲಿ ತ್ರಿಪುರದಲ್ಲಿ ನಡೆಯಿತು.  ತ್ರಿಪುರ 1949ರ ಅಕ್ಟೋಬರ್ 15 ರಂದು ಭಾರತ ಒಕ್ಕೂಟದೊಂದಿಗೆ ವಿಲೀನವಾಯಿತು.  1957ರ ನವೆಂಬರ್ 1 ರಂದು ಇದು ಭಾರತ ಒಕ್ಕೂಟ ಪ್ರದೇಶವಾಯಿತು.  1972ರ ಜನವರಿ 21 ರಂದು ಇದು ರಾಜ್ಯದ ಸ್ಥಾನಮಾನ ಪಡೆಯಿತು.  ಇಲ್ಲಿ ವಿಧಾನಸಭೆ ಇದೆ.
 
   ಮುಖ್ಯ ಸ್ಥಳಗಳು :  ರಾಜ್ಯದಲ್ಲಿ 6 ಪಟ್ಟಣಗಳಿವೆ.  ರಾಜಧಾನಿ ಅಗರ್ತಲಾದ ಜನಸಂಖ್ಯೆ 1,00,264 (1971).  ಇತರ ಪಟ್ಟಣಗಳು ಇವು : ಖೋವಾಯ್ (9,338), ಧರ್ಮನಗರ್ (16,858), ಕೈಲಾಷ್‍ಹರ್ (10,602) ; ರಾಧಾಕಿಷೋರ್ ಪುರ್ (13,924), ಬೆಲೋನಿಯ (11,374).

    ರಾಜಧಾನಿ ಅಗರ್ತಲಾ ಪ್ರಾಚೀನ ಪಟ್ಟಣ.  ಅಲ್ಲಿ ಅರಮನೆ ಇದೆ.  14 ತಲೆಗಳ ದೇವತೆಯ ಪ್ರಾಚೀನ ದೇವಾಲಯವಿದೆ.  1897 ರಲ್ಲಿ ಸಂಭವಿಸಿದ ಭೂಕಂಪದಿಂದ ಇಲ್ಲಿಯ ಅನೇಕ ಕಟ್ಟಡಗಳು ಮತ್ತು ಪವಿತ್ರ ಸ್ಥಳಗಳು ನಾಶವಾದುವು. ಇದು ರಾಜ್ಯದ ಕೈಗಾರಿಕೆ, ವ್ಯಾಪಾರ ಮತ್ತು ಶಿಕ್ಷಣ ಕೇಂದ್ರ. ರಾಧಾಕಿಷೋರ್ ಪುರ್ ಹಿಂದೂಗಳ ಯಾತ್ರಾಸ್ಥಳ, ಗುಮ್ತಿ ನದಿಯ ದುಂಬಾರ ಜಲಪಾತ ಒಂದು ಸುಂದರ ತಾಣ.  ರಾಜ್ಯದಲ್ಲಿ ಅನೇಕ ನಿಸರ್ಗರಮಣಿಯ ಸ್ಥಳಗಳಿವೆ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ